ಭಾರ್ಹುತ್ ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿರುವ ಒಂದು ಪ್ರಾಚೀನ ನೆಲೆ. ಇಲ್ಲಿ ಬೃಹತ್ ಬೌದ್ಧ ಸ್ತೂಪವೊಂದನ್ನು ಪ್ರಾಚೀನ ಕಾಲದಲ್ಲಿ ನಿರ್ಮಿಸಲಾಗಿತ್ತು. ನಿರ್ಮಾಣ ಬಹುಶಃ ಅಶೋಕನ ಕಾಲದಲ್ಲಿ (ಕ್ರಿ.ಪೂ.ಸು.250) ಆರಂಭಿಸಲಾಯಿತೆಂದೂ ಇದನ್ನು ವಿಸ್ತರಿಸಿ ಇದರ ಸುತ್ತ ಕಲ್ಲಿನ ಕಟಕಟೆಯನ್ನೂ ಅದರ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ದ್ವಾರಗಳನ್ನು ಕ್ರಿ.ಪೂ. 2ನೆಯ ಶತಮಾನದಲ್ಲಿ ಕಟ್ಟಲಾಯಿತೆಂದು ತಿಳಿದುಬರುವುದು. ಈ ಕಟಕಟೆಯ ಒಳಮುಖದ ಮೇಲೆ ಅನೇಕ ಉಬ್ಬುಚಿತ್ರಗಳನ್ನು ಕೊರೆಯಲಾಗಿತ್ತೆಂದೂ ಕ್ರಿ. ಪೂ. 1ನೆಯ ಶತಮಾನದ ವೇಳೆಗೆ ನಾಲ್ಕು ದ್ವಾರಗಳಲ್ಲೂ ಸುಂದರ ಚಿತ್ರಗಳನ್ನು ಕೊರೆದ ತೋರಣಗಳನ್ನು ರಚಿಸಲಾಯಿತೆಂದೂ ಶುಂಗ ದೊರೆ ಧನಭೂತಿ ಕ್ರಿ.ಪೂ. 72ಕ್ಕೆ ಹಿಂದೆ ಇವನ್ನು ನಿರ್ಮಿಸಿದನೆಂದೂ ಅಲ್ಲಿಯ ಶಾಸನದಿಂದ ತಿಳಿದುಬರುತ್ತದೆ. ಇಲ್ಲಿಯ ಶಿಲ್ಪಗಳು ಭಾರತದಲ್ಲಿ ವಿಕಾಸಕೊಳ್ಳುತ್ತಿದ್ದ ಬೌದ್ಧಕಲೆಯ ಆತ್ಯಂತ ಪ್ರಾಚೀನ ಹಾಗೂ ಉತ್ತಮ ನಿದರ್ಶನಗಳು.

ಈಗ ಆ ಸ್ಥಳದಲ್ಲಿ ಮೂಲ ನಿರ್ಮಾಣವಿಲ್ಲದಿದ್ದರೂ ಅದರ ಕೆಲವು ಉಳಿಕೆಗಳನ್ನು, ಮುಖ್ಯವಾಗಿ ಕಟಕಟೆಯ ಭಾಗಗಳನ್ನು, ಕಲ್ಕತ್ತದಲ್ಲಿರುವ ಭಾರತೀಯ ವಸ್ತುಸಂಗ್ರಹಾಲಯದಲ್ಲೂ ಅಲಹಾಬಾದಿನ ಪೌರಸಭಾ ವಸ್ತುಸಂಗ್ರಹಾಲಯದಲ್ಲೂ ರಕ್ಷಿಸಿ ಇಡಲಾಗಿದೆ. ಕೆಂಪು ಮರಳುಕಲ್ಲುಗಳ ಮೇಲೆ ಕೆತ್ತಲಾಗಿರುವ ಈ ಕಲಾಸಂಗ್ರಹಗಳು ಬುದ್ಧನ ಜೀವನಕ್ಕೆ ಸಂಬಂಧಪಟ್ಟ ಹಲವಾರು ಜಾತಕಕಥೆಗಳ ದೃಶ್ಯಗಳನ್ನು ಮತ್ತು ಜನಜೀವನದ ಹಲವಾರು ಹಾಸ್ಯ ಚಿತ್ರಗಳನ್ನು ಒಳಗೊಂಡಿವೆ. ಇದನ್ನು ಕೆತ್ತಿರುವ ಕೆಲಸಗಾರರ ಅಥವಾ ದಾನಿಗಳ ಬ್ರಾಹ್ಮೀಲಿಪಿಯ ಬರೆಹಗಳು ಈ ಚಿತ್ರಗಳನ್ನು ಗುರುತಿಸಲು ಸಹಾಯಕವಾಗಿವೆ. ಇವು ಆ ಕಾಲದ ಜನಜೀವನವನ್ನೂ ಸಾಮಾಜಿಕ ರಾಜಕೀಯ ಧಾರ್ಮಿಕ ಹಾಗೂ ಸಾಂಸ್ಕøತಿಕ ಬೆಳವಣಿಗೆಯನ್ನೂ ಪ್ರತಿಬಿಂಬಿಸುತ್ತದೆ.				
(ಸಿ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ